ಭಾರತದಲ್ಲಿ ಕೃಷಿ
ಕೃಷಿ ಭಾರತದ ಮುಖ್ಯ ಕಸುಬು. ಶೇಕಡಾ 70ಕ್ಕೂ ಹೆಚ್ಚು ಜನರಿಗೆ ಜೀವನಾಧಾರ. ಭಾರತದಲ್ಲಿ ಕೃಷಿಯ ಅಭಿವೃದ್ಧಿ ವೇದ ಕಾಲಕ್ಕೂ ಹಿಂದೆಯೇ ಪ್ರಾರಂಭವಾದಂತಿದೆ. ಋಗ್ವೇದದಲ್ಲಿ ಕೃಷಿಯ ಬಗ್ಗೆ ಅನೇಕ ಪ್ರಸ್ತಾಪಗಳಿವೆ. ಕೃಷಿಗೆ ಸಂಬಂಧಪಟ್ಟ ಹಲವಾರು ಗ್ರಂಥಗಳು, ಶಾಸ್ತ್ರಗಳು ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ರಚಿತವಾಗಿದ್ದುವು. ಅವುಗಳಲ್ಲಿ ಅನೇಕವು ಈಗ ದೊರಕುತ್ತಿಲ್ಲವಾದರೂ ದೊರಕಿರುವ ಹಲವು ಗ್ರಂಥಗಳಿಂದ ಕೃಷಿಯಲ್ಲಿ ನಮ್ಮ ಪೂರ್ವಿಕರು ಬಹಳಷ್ಟು ಮುಂದುವರಿದಿದ್ದರೆಂದು ತಿಳಿಯುತ್ತದೆ. ಆಗಿನವರಿಗೆ ಇಂದಿನ ವಿಜ್ಞಾನದ ನೆರವು ಇರಲಿಲ್ಲ. ಅವರ ಸ್ವಂತ ಅನುಭವ, ಅವಲೋಕನಗಳಷ್ಟೇ ಆ ಪ್ರಗತಿಗೆ ಕಾರಣವಾಗಿದ್ದುವು. 

ಕೃಷಿಗೆ ಸಂಬಂಧಿಸಿದ ಉಲ್ಲೇಖಗಳಿರುವ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಅಥರ್ವಣವೇದ (ಕ್ರಿ. ಪೂ. 1500-500), ಕೌಟಿಲ್ಯನ ಅರ್ಥಶಾಸ್ತ್ರ (ಕ್ರಿ. ಪೂ. 321-186), ಚರಕ ಮತ್ತು ಸುಶ್ರುತ ಸಂಹಿತಾ (ಕ್ರಿ. ಶ. 100-500), ವಿಷ್ಣು ಪುರಾಣ (ಕ್ರಿ. ಶ. 500), ವರಾಹಮಿಹಿರನ ಬೃಹತ್ ಸಂಹಿತೆ (ಕ್ರಿ. ಶ. 500), ಆತನ ಪತ್ನಿ ಕನ್ನಾ ರಚಿಸಿರುವ ಕೃಷಿ ಸೂತ್ರಗಳು (ಗಾದೆಗಳು), ಅಗ್ನಿಪುರಾಣ (ಕ್ರಿ. ಶ. 500-700), ಅಮರಕೋಶ (ಕ್ರಿ.ಶ. 800), ಪರಾಶರನ ಕೃಷಿ ಸಂಗ್ರಹ ಅಥವಾ ಕೃಷಿ ತಂತ್ರ (ಕ್ರಿ. ಶ. 500-1000), ಸಾರಂಗಧರನ ಉಪವನ ವಿನೋದ ಅಥವಾ ವೃಕ್ಷಾಯುರ್ವೇದ (ಕ್ರಿ. ಶ. 1170-1330) ಮುಂತಾದವು ಬಹುಮುಖ್ಯವಾದವು. 

ಅಗ್ನಿಪುರಾಣ ಮತ್ತು ಬೃಹತ್ ಸಂಹಿತೆಗಳಲ್ಲಿ ವರಾಹಮಿಹಿರ ಮರಗಿಡಗಳನ್ನು ಬೆಳೆಸುವ ವಿಧಾನ ವಿವರಿಸಿದ್ದಾನೆ. ಸಸ್ಯ ಜೀವನದಲ್ಲಿ ಬೀಜಗಳ ಪಾತ್ರ, ಅವುಗಳ ಆಯ್ಕೆ ವಿಧಾನ, ಮೊಳೆಯುವಿಕೆ, ಬಿತ್ತುವುದು, ನೆಡುವುದು, ಪೋಷಣೆ, ಗೊಬ್ಬರದ ಅಗತ್ಯ ಮತ್ತು ಅದನ್ನು ನೀಡುವ ವಿಧಾನ ಮುಂತಾದವು ಕೃಷಿಯ ಅವಿಭಾಜ್ಯ ಅಂಗಗಳು ಎಂದು ಹೇಳಿದ್ದಾನೆ. ವಿಷ್ಣುಪುರಾಣದಲ್ಲಿ ಸಸ್ಯಗಳು ಅನೇಕ ಅಂಗಗಳ ಸಂಗಮದಿಂದಾದವು ಎಂಬ ಆಧಾರದ ಮೇಲೆ ಭ್ರೂಣ (ಅಂಕುರ), ಬೇರು (ಮೂಲ), ಕಾಂಡ (ನಾಳ), ಎಲೆ (ಪತ್ರ), ಹೂವು (ಪುಷ್ಪ) ಹಾಲು (ಕ್ಷೀರ) ಬೀಜ (ತಂಡುಲ) ಮುಂತಾದ ಭಾಗಗಳು ಭತ್ತದಲ್ಲಿವೆ ಎಂದು ವಿವರಿಸಿ ಸಮರ್ಪಕ ಮಣ್ಣು ಮತ್ತು ನೀರು ಒದಗಿಸಿದರೆ ಇವೆಲ್ಲವೂ ಸರಿಯಾಗಿ ಬೆಳೆದು ಫಲ ನೀಡುತ್ತವೆ ಎಂದಿದ್ದಾನೆ.
ಕೃಷಿಗೆ ಹಾಗೂ ಸಸ್ಯಗಳ ಬೆಳವಣಿಗೆಗೆ ಮಣ್ಣು ಮೂಲ ಎಂದು ಗುರುತಿಸಲಾಗಿತ್ತು. ಮಣ್ಣಿನ ಗುಣಲಕ್ಷಣಗಳು ಅದರ ವಿಂಗಡಣೆ ಮತ್ತು ಯಾವ ಬೆಳೆ ಯಾವ ಮಣ್ಣಿಗೆ ಸೂಕ್ತವಾದದ್ದು ಎಂಬ ಅರಿವು ಪ್ರಾಚೀನ ಭಾರತೀಯರಿಗಿತ್ತು. ಕನ್ನಾ ಬರೆದ ಗಾದೆಗಳಿಂದ ಇದು ವ್ಯಕ್ತಪಡುತ್ತದೆ. ಚರಕ, ಸುಶ್ರುತ ಮತ್ತು ವರಾಹಮಿಹಿರರು ಮಣ್ಣನ್ನು ಮೂರು ಮುಖ್ಯ ವಿಧಗಳಾಗಿ ವಿಂಗಡಿಸಿದ್ದರು : ಜಂಗಲ (ಬಯಲು ಸೀಮೆ), ಅನುಪಮ (ಗಿರಿ ಶಿಖರಗಳಿಲ್ಲದ ನದಿ - ಹಳ್ಳಗಳಿಂದ ತುಂಬಿದ ಕಾಡುಗಳಿರುವ ಪ್ರದೇಶ), ಸಾಧಾರಣ (ವನಸ್ಪತಿಗಳು, ಗಿಡಮರಗಳು ಯಥೇಚ್ಛವಾಗಿ ಬೆಳೆಯುವ ಪ್ರದೇಶ), ಮರಗಿಡ ಮತ್ತು ವಿವಿಧ ಬೆಳೆಗಳನ್ನು ಬೆಳೆಸಬಹುದಾದುದರ ಆಧಾರದ ಮೇಲೆ ಗುಡ್ಡಗಾಡು, ನದಿ ಹಳ್ಳ ಪ್ರದೇಶ, ಅರಣ್ಯ, ಹುಲ್ಲುಗಾವಲು ಮುಂತಾಗಿ ಕಶ್ಯಪ ವಿಂಗಡಿಸಿದ್ದಾನೆ. ಆತ ವಿವರಿಸುವ ಉತ್ತಮ ವ್ಯವಸಾಯ ಯೋಗ್ಯ ಭೂಮಿಯ ಲಕ್ಷಣಗಳು ಇಂದಿಗೂ ಅನ್ವಯವಾಗುತ್ತವೆ. ಉತ್ತಮ ಭೂಮಿಗಳಲ್ಲಿ ಕಲ್ಲು, ಹುಲ್ಲು, ಹೊಟ್ಟು ಇರಬಾರದು. ಮಣ್ಣು ಮೆದುವಾಗಿ, ಅಂಟಾಗಿ ಹಸಿಯಾಗಿರಬೇಕು. ನಸುಗೆಂಪು ಅಥವಾ ಕಪ್ಪು ಬಣ್ಣದ್ದಾಗಿರಬೇಕು. ಮಣ್ಣಿನಲ್ಲಿ ಅತಿ ಹೆಚ್ಚಿನ ನೀರು ನಿಲ್ಲಬಾರದು. ಬೀಜಗಳು ಬೇಗ ಮೊಳೆಯುವಂತಿರಬೇಕು. ಉಳುಮೆಗೆ ಸುಲಭವಾಗಿ, ತಗ್ಗುದಿಣ್ಣೆಗಳಿಲ್ಲದೆ ಮಟ್ಟಸವಾಗಿರಬೇಕು. ಅದರಲ್ಲಿ ಉಪದ್ರವಕಾರಿ ಕ್ರಿಮಿಕೀಟಗಳಿರಬಾರದು. ಇದು ಉತ್ತಮ ಕೃಷಿಗೆ ಇಂದಿಗೂ ಅಗತ್ಯ. ವಿಶ್ವವಲ್ಲಭ ಗ್ರಂಥದಲ್ಲಿ ಇದನ್ನು ಇನ್ನೂ ವಿವರವಾಗಿ ಚರ್ಚಿಸಿ, ಅಂಥ ಭೂಮಿಯಲ್ಲಿ ಬೆಳೆಯಬಹುದಾದ ಮರಗಿಡಗಳ ಮತ್ತು ಬೆಳೆಗಳ ವಿವರವನ್ನೂ ಕೊಟ್ಟಿದೆ. 

	ಈ ಗ್ರಂಥಗಳಲಿರುವ ಸಸ್ಯಶಾಸ್ತ್ರ, ಸಸ್ಯಗಳ ಬಾಹ್ಯರೂಪ, ಸಸ್ಯರಚನೆ, ಶರೀರಕ್ರಿಯೆ, ಅವುಗಳ ಚಲನೆ, ಉಸಿರಾಡುವಿಕೆ, ಬೆಳವಣಿಗೆ, ಮುಪ್ಪು, ಸಾವು ಮುಂತಾದವುಗಳ ಪೂರ್ಣ ವಿವರಣೆ ಮತ್ತು ವರ್ಗೀಕರಣ ಅಚ್ಚರಿಯುಂಟುಮಾಡುತ್ತವೆ. ಗುಣರತ್ನ ತನ್ನ ಸದ್ದರ್ಶನ ಸಮುಚ್ಚಯದಲ್ಲಿ ಮಗುವಿನ ದೇಹ ತಾಯಿಯ ಆಹಾರವನ್ನು ಬಳಸಿಕೊಳ್ಳುವ ರೀತಿಯಲ್ಲಿ ಸಸ್ಯದ ಒಡಲು ಭೂಮಿಯ ಪ್ರಕೃತಿಗೆ ಅನುಗುಣವಾಗಿ ಅಲ್ಲಿಯ ಸತ್ತ್ವವನ್ನು ತುಂಬಿಕೊಳ್ಳುತ್ತದೆ ಎಂದು ಹೇಳಿದ್ದಾನೆ. 

	ಕೃಷಿಗೆ ಉತ್ತಮ ಬೀಜ ಮುಖ್ಯ: ಕೃಷಿಕರು ಉತ್ತಮ ಬೀಜಗಳನ್ನು ಯುಕ್ತರೀತಿಯಲ್ಲಿ ಶೇಖರಿಸಿ, ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಸರಿಯಾಗಿ ಕೂಡಿಡಬೇಕು. ರೈತರಿಗೆ ಸಾಧ್ಯವಿಲ್ಲದಿದ್ದಲ್ಲಿ ರಾಜನೇ ಈ ಕಾರ್ಯ ಮಾಡಿಸಿ ಉತ್ತಮ ಬೀಜವನ್ನು ಸಕಾಲದಲ್ಲಿ ರೈತರಿಗೆ ಹಂಚಬೇಕು ಎಂದು ಬಿತ್ತನೆಯ ಪ್ರಾಮುಖ್ಯವನ್ನು ಕಶ್ಯಪಮುನಿ ವಿವರಿಸಿದ್ದಾನೆ. ಬೀಜ ಪರಿಷ್ಕರಣೆಯ ಅಗತ್ಯ ಅಂದಿನವರಿಗೆ ತಿಳಿದಿತ್ತು. ಸುರಫಲನ ವೃಕ್ಷಾಯುರ್ವೇದದಲ್ಲಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಈ ವಿಷಯ ಪ್ರಸ್ತಾಪಗೊಂಡಿದೆ. ಅಂದಿನವರಿಗೆ ರಾಸಾಯನಿಕ ವಸ್ತುಗಳ ಅರಿವು ಅಷ್ಟಾಗಿ ಇರಲಿಲ್ಲ. ಬೆಲ್ಲ, ಹಾಲು, ಎಳ್ಳಿನ ಬೂದಿ, ತುಪ್ಪ, ಸಗಣಿ ಸುಲಭವಾಗಿ ದೊರೆಯುತ್ತಿದ್ದ ವಸ್ತುಗಳು. ಇವನ್ನು ಬಳಸಿ ಹೇಗೆ ಬೀಜಗಳನ್ನು ಪರಿಷ್ಕರಿಸಬೇಕು ಎಂದು ವಿವರಿಸಿದ್ದಾರೆ. ಧೂಪದ ಮಹತ್ತ್ವವನ್ನೂ ಅವರು ಅರಿತಿದ್ದರು. ಕೀಟನಾಶಕ್ಕೆ ಇದು ಸಹಾಯಕವಾಗಿತ್ತು. ಹಸುಗಳ ಮೂತ್ರ ಮತ್ತು ಜೇನುತುಪ್ಪವನ್ನೂ ಇದಕ್ಕಾಗಿ ಬಳಸುತ್ತಿದ್ದರು.

	ಸುರಫಲ ತನ್ನ ವೃಕ್ಷಾಯುರ್ವೇದದಲ್ಲಿ ಬೇರೆ ಬೇರೆ ಬೆಳೆಗಳನ್ನು ನೆಡುವ ಅಂತರವನ್ನೂ ಬೀಜಪ್ರಮಾಣವನ್ನೂ ವಿವರಿಸಿದ್ದಾನೆ. ಅಂತರ ಅಗತ್ಯಕ್ಕಿಂತ ಹೆಚ್ಚಾದರೆ ಗಾಳಿಯಿಂದ ಅಪಾಯವಾಗಬಹುದೆಂದೂ ಅಂತರ ತೀರಾ ಕಡಿಮೆಯಾದರೆ ಇಳುವರಿ ಕಡಿಮೆಯಾಗಬಹುದೆಂದೂ ವಿವರಿಸಿ. ಹಣ್ಣು ಮರಗಳನ್ನು ಕನಿಷ್ಟ 45 ಘಿ 45 ಘಿ 45 ಘನ ಸೆಂ ಮೀ ಗುಂಡಿಗಳಲ್ಲಿ ನೆಡುವುದು ಉತ್ತಮವೆಂದು ಹೇಳಿದ್ದಾನೆ. ನೆಡುವಾಗ ಬೇರುಗಳಿಗೆ ಹಾಕಬೇಕಾದ ಲೇಪನ ಮತ್ತು ಕಸಿಕಟ್ಟುವ, ಗೂಟಿಮಾಡುವ ಕ್ರಮಗಳನ್ನೂ ಕೊಟ್ಟಿದ್ದಾನೆ. ಬಡತನ ನಿವಾರಣೆಗೆ ಗಿಡಮರಗಳೇ ಮುಖ್ಯ ಸಾಧನವೆಂಬುದು ಆತನ ದೃಢನಂಬಿಕೆ.

	ಸಸ್ಯಗಳು ಸಮರ್ಪಕವಾಗಿ ಬೆಳೆಯಲು ಅವುಗಳಿಗೆ ಗೊಬ್ಬರ ಅಗತ್ಯವೆಂಬುದು ಅಂದಿನವರಿಗೆ ತಿಳಿದಿತ್ತು. ಅಥರ್ವಣವೇದದಲ್ಲೇ ಇದನ್ನು ವಿವರಿಸಲಾಗಿದೆ. ಮುಂದೆ ಅನೇಕ ವಿವರಗಳು ಅಗ್ನಿಪುರಾಣ, ಶುಕ್ರನೀತಿ, ಬೃಹತ್ ಸಂಹಿತೆ. ಕೃಷಿಸಂಗ್ರಹ ಮತ್ತು ವೃಕ್ಷಾಯುರ್ವೇದಗಳಲ್ಲಿ ಕಂಡುಬರುತ್ತವೆ. ಅವರಿಗೆ ರಾಸಾಯನಿಕ ಗೊಬ್ಬರಗಳಾಗಲೀ ಅವುಗಳಲ್ಲಿಯ ವಿವಿಧ ಅಂಶಗಳ ಅರಿವಾಗಲೀ ಇರಲಿಲ್ಲವಾದರೂ ಅವುಗಳಿಂದಾಗುವ ಪರಿಣಾಮಗಳು ತಿಳಿದಿದ್ದವು. ಅದು ಅನುಭವದ ಅರಿವು. ಮಲಮೂತ್ರ, ಪ್ರಾಣಿದೇಹ (ಮಾಂಸ), ಮೀನು, ದನಸಗಣಿ, ಜೇನುತುಪ್ಪ ಮುಂತಾದವು ಆಗ ಅವರಿಗೆ ಸಿಗುತ್ತಿದ್ದ ವಸ್ತುಗಳು. ಅವನ್ನೇ ವಿವಿಧ ರೀತಿಯಲ್ಲಿ ಬಳಸಿ ಅವರು ಸಾಕಷ್ಟು ಉತ್ತಮ ಇಳುವರಿ ಪಡೆಯುತ್ತಿದ್ದರು. ಸಸ್ಯಗಳು ಅಚಲ ಜೀವಿಗಳು; ಅವುಗಳಿಗೆ ಗ್ರಹಣ ಶಕ್ತಿಯಿದೆ. ಜೀವಂತ ವಸ್ತುಗಳಾದ್ದರಿಂದ ಅವುಗಳಿಗೆ ಪೋಷಣೆ ಮತ್ತು ಔಷಧೋಪಚಾರ ಅಗತ್ಯವೆಂದು ಅರಿತಿದ್ದರಿಂದ ಅವನ್ನು ಚೆನ್ನಾಗಿ ಪೋಷಿಸುವ ಮಾರ್ಗ ತಿಳಿದಿದ್ದರು. ಗೊಬ್ಬರಗಳ ಮಹತ್ವವನ್ನು ಭಾರತದ ಕೃಷಿಕರು ಋಗ್ವೇದ ಕಾಲದಲ್ಲೇ ಚೆನ್ನಾಗಿ ಅರಿತಿದ್ದರು. ಪತ್ರಪ್ರೋಕ್ಷಣೆ, ಧೂಪಕ್ರಿಯೆ, ಸಸ್ಯ ಪ್ರಚೋದಕಗಳ (ಹಾರ್ಮೊನುಗಳು) ಬಳಕೆ, ಕಿಣ್ವಗಳ ಉಪಯುಕ್ತತೆ. ಗೊಬ್ಬರ ಮುಂತಾದವುಗಳ ಬಳಕೆ ಆಗಲೇ ಭಾರತದಲ್ಲಿ ಬಳಕೆಯಲ್ಲಿದ್ದುವು.

	ಪೈರುಗಳನ್ನೂ ಗಿಡ ಮರಗಳನ್ನೂ ಅನೇಕ ಪೀಡಕಗಳಿಂದ ರಕ್ಷಿಸುವುದು ಅಗತ್ಯವೆಂದು ಅವರು ಅರಿತಿದ್ದರು. ಉದ್ದೇಶಪೂರ್ವಕವಾಗಿ ಗಿಡಮರಗಳನ್ನು ನಾಶಪಡಿಸಿದವರಿಗೆ ಶಿಕ್ಷೆ ಅಥವಾ ದಂಡ ವಿಧಿಸುತ್ತಿದ್ದುದರ ವಿವರಣೆ ಅನೇಕ ಕೃಷಿ ಗ್ರಂಥಗಳಲ್ಲಿ ಮತ್ತು ನ್ಯಾಯಶಾಸ್ತ್ರಗಳಲ್ಲಿ ಕಂಡುಬರುತ್ತದೆ. ಬಿಳಿ ಸಾಸುವೆ, ಸಪಾರಿ ಮೀನು, ಹಂದಿ ಮತ್ತು ಬೆಕ್ಕಿನ ಮಲಗಳ ಸಮಪ್ರಮಾಣವನ್ನು ಶುದ್ಧೀಕರಿಸಿದ ಬೆಣ್ಣೆಯಲ್ಲಿ ಬೆರೆಸಿ, ಸಸ್ಯದ ಬೇರುಗಳಿಗೆ ಹಾಗೂ ಕಾಂಡಗಳಿಗೆ ಸವರಿ, ಧೂಪ ಹಾಕಿದರೆ ಎಲ್ಲ ರೋಗಗಳಿಂದ ಅವು ಮುಕ್ತವಾಗುತ್ತವೆಂದೂ ಅಂಕೋಲ ಪುಷ್ಪದ ಕಷಾಯದಲ್ಲಿ ಶುದ್ಧೀಕರಿಸಿದ ಬೆಣ್ಣೆಗೆ ಜೇನುತುಪ್ಪ, ಬಿಳಿಸಾಸುವೆ ಪುಡಿ, ಜಿಂಕೆ ಮತ್ತು ಕಾಡುಹಂದಿ ತುಪ್ಪ ಬೆರಸಿ ಮರಗಳಿಗೆ ಎರೆದರೆ ಅವು ರೋಗರಹಿತವಾಗುತ್ತವೆಂದು ಉಪವನ ವಿನೋದದಲ್ಲಿ ವಿವರಿಸಲಾಗಿದೆ.

	ಪ್ರಾಚೀನ ಭಾರತದಲ್ಲೂ ಭತ್ತವೇ ಮುಖ್ಯ ಆಹಾರದ ಬೆಳೆ. ಇದರ ಕೃಷಿಗೆ ಪಾತಿಗಳನ್ನು ಮಾಡಿ ನೀರು ಒಂದು ಪಾತಿಯಿಂದ ಇನ್ನೊಂದಕ್ಕೆ ಹರಿದು ಹೋಗುವಂತೆ ಕಾಲುವೆ ಮೂಲಕ ನೀರು ಹಾಯಿಸುವ ಅನುಕೂಲ ಮಾಡಿಕೊಂಡು ಅದನ್ನು ಬೆಳೆಯಬೇಕೆಂದು ವಿವರಿಸಲಾಗಿದೆ. ಬಣ್ಣ, ವಾಸನೆ ಇತ್ಯಾದಿಗಳ ಆಧಾರದಿಂದ ಅಂದು ಬೆಳೆಯುತ್ತಿದ್ದ ಭತ್ತದ ಜಾತಿಗಳನ್ನು ಮೂರು ಮುಖ್ಯ ಪಂಗಡಗಳಾಗಿ ವಿಂಗಡಿಸಲಾಗಿತ್ತು: 1. ಪರಿಮಳಯುಕ್ತವಾದ ಹಾಗೂ ಗಡಸು ಅಕ್ಕಿ ಕಲಮ ; 2. ವಾಸನೆಯಿಲ್ಲದ ಪೌಷ್ಟಿಕ ತಳಿ; 3. ಸುಮಾರು 26 ವಿಧಗಳುಳ್ಳ ಗುಂಪು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚರಕ ಸುಶ್ರುತರ ಗ್ರಂಥಗಳಲ್ಲಿ ಇವುಗಳ ವಿವರಣೆಯಿದೆ. ಆಗ ಅನುಸರಿಸುತ್ತಿದ್ದ ವಿಧಾನಕ್ಕೂ ಈಗಿನ ವಿಧಾನಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ.

	ಭತ್ತ ಮಾತ್ರವಲ್ಲ, ಹೆಸರು, ಉದ್ದು, ತೊಗರಿ, ಮೆಣಸು, ಹರಳು, ಜೀರಿಗೆ, ಸಾಸುವೆ, ಎಳ್ಳು, ಗೋಧಿ, ಕಬ್ಬು, ಬಾಳೆ, ಹತ್ತಿ ಮುಂತಾದವನ್ನು ಬೆಳೆಯುವ ಕ್ರಮ ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆಯೂ ಅನೇಕ ವಿವರಗಳಿವೆ. ಕೆಲವು ಬೆಳೆಗಳಿಗೆ ಮೇಲುಗೊಬ್ಬರ ಒದಗಿಸುವ ವಿಧಾನವೂ ರೂಢಿಯಲ್ಲಿತ್ತು. ಚರಕನ ಗ್ರಂಥಗಳಲ್ಲಿ ಕಬ್ಬಿನ ಎರಡು ತಳಿಗಳ ವಿವರಣೆಯಿದೆ. ಅಲ್ಲಿಂದ 100-200 ವರ್ಷಗಳ ತರುವಾಯ ಸುಶ್ರುತನ ಕಾಲದಲ್ಲಿ 12 ತಳಿಗಳ ವಿವರಣೆ ಸಿಕ್ಕುತ್ತದೆ. ಕಬ್ಬನ್ನು ಬೆಳೆಸುವುದು ಕಷ್ಟದಾಯಕ ಹಾಗೂ ಅದರ ಖರ್ಚು ಅಧಿಕ. ಆದ್ದರಿಂದ ಹಲವಾರು ರೈತರು ಸೇರಿಮ 'ಗ್ರಂಥ ' ಎಂಬ ಸಹಕಾರ ಪದ್ಧತಿ ಅನುಸರಿಸಿ ಬೆಳೆಯುತ್ತಾರೆ ಎಂದು ಸುಶ್ರುತ ಹೇಳಿದ್ದಾನೆ. ಅಂದರೆ ಸಹಕಾರ ಕೃಷಿಯೂ ಪರಿಚಿತವಿತ್ತು. ಹಣ್ಣು ಮತ್ತಿತರ ಮರಗಳ ತೋಪುಗಳನ್ನೂ ಅವರು ಬೆಳೆಸುತ್ತಿದ್ದರು. ಜನರಿಗೆ ಬೇಕಾಗುವ ಮರಗಳನ್ನು ರಾಜನೇ ಬೆಳೆಸಿ ಅನುಕೂಲ ಒದಗಿಸಬೇಕೆಂದು ಕಶ್ಯಪ ಹೇಳಿದ್ದಾನೆ. ಅಂದರೆ ಕಾಡುಗಳನ್ನು ವೃದ್ಧಿಗೊಳಿಸಿ ಜನತೆಗೆ ಅನುಕೂಲ ಉಂಟುಮಾಡುವುದು ರಾಜನ (ಸರ್ಕಾರದ) ಕರ್ತವ್ಯವೆಂದಾಗಿತ್ತು. ಹಾಗೆ ಬೆಳೆಸಬೇಕಾದ ಮರಗಳ ಹೆಸರಿನ ಪಟ್ಟಿಯನ್ನು ಆತ ಕೊಟ್ಟಿದ್ದಾನೆ.

	ಅನುಕ್ರಮ ಬೆಳೆ (ಬಹುಬೆಳೆ) ಮತ್ತು ಬೆಳೆ ಆವರ್ತನೆಗಳನ್ನು ಕೂಡ ಅವರು ಅನುಸರಿಸುತ್ತಿದ್ದರು. ಎರಡು ಬೆಳೆಯ ವಿಚಾರ ತೈತ್ತಿರೀಯ ಸಂಹಿತೆಯಲ್ಲಿ ದೊರಕುತ್ತದೆ. ಮೆಗಾಸ್ತನೀಸ್ ಭಾರತಕ್ಕೆ ಬಂದಾಗ ಚಳಿಗಾಲದಲ್ಲಿ ಗೋಧಿಯನ್ನೂ ಬೇಸಗೆಯಲ್ಲಿ ಕಿರುಧಾನ್ಯಗಳನ್ನೂ ಮಳೆಗಾಲದಲ್ಲಿ ಭತ್ತವನ್ನೂ ಬೆಳೆಯುತ್ತಿದ್ದುದನ್ನು ಗಮನಿಸಿ ವಿವರಿಸಿದ್ದಾನೆ. ಮೂರು ಬೆಳೆಗಳ ಪ್ರಸ್ತಾಪ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಇದೆ. 

	ನೀರಾವರಿ ಬಾವಿಗಳೂ ನೀರೆತ್ತುವ ಯಂತ್ರಗಳೂ ವಿಪುಲವಾಗಿದ್ದುವು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಇವುಗಳ ಪೂರ್ಣ ವಿವರಣೆಯಿದೆ. ಋಗ್ವೇದದಲ್ಲಿ ಆಸ್ಮಚಕ್ರ ಎಂಬ ನೀರೆತ್ತುವ ಸಾಧನದ ಉಲ್ಲೇಖವಿದೆ. ಇದಲ್ಲದೆ ದ್ರೋಣ, ಅರಫುಟ, ಫತಿಯಂತ್ರ ಮೊದಲಾದ ಸಲಕರಣೆಗಳೂ ಬಳಕೆಯಲ್ಲಿದ್ದುದು ಕಂಡು ಬರುತ್ತದೆ. ಈಗ ಅವುಗಳ ವಿವರ ದೊರಕುತ್ತಿಲ್ಲ. 

	ನೇಗಿಲು ಬಳಕೆಯಲ್ಲಿತ್ತು. ಅದಕ್ಕೆ ಹೆಚ್ಚಿನ ಗೌರವವಿತ್ತು. ಉಳುಮೆ ಪ್ರಾರಂಭಿಸುವಾಗ ನೇಗಿಲಿಗೆ ಶಾಸ್ತ್ರೋಕ್ತವಾಗಿ ಪೂಜೆಮಾಡಿ ಬಳಸುತ್ತಿದ್ದರು. ಈ ಪೂಜ್ಯಭಾವನೆಯಿಂದ ಬಹುಶಃ ಅದು ಕೃಷ್ಣ ಸೋದರ, ಬಲರಾಮನ ಆಯುಧವಾಯಿತು. ಋಗ್ವೇದದಲ್ಲಿ ನೇಗಿಲನ್ನು ಪ್ರಶಂಸಿಸಿ, ಅದು ಪೂಜಾರ್ಹ ಎಂದು ವಿವರಿಸಲಾಗಿದೆ. ನೇಗಿಲನ್ನು ದಾನಮಾಡುವುದು ಅತ್ಯಂತ ಗೌರವದ ಕೆಲಸವಾಗಿತ್ತು. ಕುಡುಗೋಲು (ಸೃಣಿ); ಕುಂಟೆ (ಖಣತ್ರ), ಜರಡಿ (ಕಳನಿ); ಕಣಜ (ಸ್ಥವಿ)-ಇವೆಲ್ಲ ಆಗಲೂ ಬಳಕೆಯಲ್ಲಿದ್ದುವು. ಈ ಉಪಕರಣಗಳಲ್ಲಾಗಲಿ ನೇಗಿಲಿನಲ್ಲಾಗಲಿ ಅಂದಿನಿಂದ ಇಂದಿನವರೆಗೆ ಗಮನಾರ್ಹ ಬದಲಾವಣೆಯೇನೂ ಆಗಿಲ್ಲ. 

	ಹೀಗೆ ಪ್ರಾಚೀನ ಭಾರತದಲ್ಲಿ ವ್ಯವಸಾಯ ಶಾಸ್ತ್ರೋಕ್ತವಾದ ಕ್ರಮಾನುಸರಣಿಯಲ್ಲಿತ್ತು. ಆಗಲೂ ಅನೇಕ ಉಪಕರಣಗಳ ಬಳಕೆ ಇತ್ತು. ಸಸ್ಯಾಭಿವೃದ್ಧಿಗೆ ಬೀಜದ ಆಯ್ಕೆ, ಲಿಂಗಭೇದ, ಬೆಳೆಸುವ ವಿಧಾನ, ಸಸ್ಯ ಸಂರಕ್ಷಣೆ ಎಲ್ಲವನ್ನೂ ಕ್ರಮವಾಗಿ ಆಚರಿಸುತ್ತಿದ್ದರು. ಆದರೆ ಅವು ಆಕಾಲಕ್ಕೆ ತಕ್ಕಂತೆ ಆಗ ಲಭ್ಯವಿದ್ದ ವಸ್ತುಗಳನ್ನು ಅನುಸರಿಸಿದ್ದವು. ವ್ಯವಸಾಯಾಭಿವೃದ್ದಿಯಲ್ಲಿ ರಾಜ್ಯ (ಸರ್ಕಾರ) ಮಾಡಬೇಕಾದ ಕಾರ್ಯವೇನು( ರೈತರ ಕಾರ್ಯವೇನು(-ಎಂಬುದನ್ನು ವಿವರಿಸಲಾಗಿತ್ತು. ಕೃಷಿಯ ಬೇರೆ ಬೇರೆ ಆಡಳಿತ ನಿರ್ವಹಿಸಲು ಪ್ರತಿಭಾಗಕ್ಕೂ ಒಬ್ಬ ಅಧ್ಯಕ್ಷನಿರುತ್ತಿದ್ದ. ಇವರಲ್ಲಿ ಸೀತಾಧ್ಯಕ್ಷ (ಕೃಷಿ ಮುಖ್ಯಾಧಿಕಾರಿ); ಗೋ ಅಧ್ಯಕ್ಷ (ಪಶುಪಾಲನಾಧಿಕಾರಿ); ತುಸಮಾನಪಟಸ (ತೂಕ ಮತ್ತು ಅಳತೆ ಅಧಿಕಾರಿ); ಕುಪ್ಯಾಧ್ಯಕ್ಷ (ಅರಣ್ಯಾಧಿಕಾರಿ); ವಿವೀತಾಧ್ಯಕ್ಷ (ಹುಲ್ಲುಗಾವಲ ಅಧಿಕಾರಿ) ಮತ್ತು ಸೂತ್ರಾಧಿಕಾರಿ (ವಸ್ತು ತಯಾರಿಕೆ ಅಧಿಕಾರಿ) ಮುಖ್ಯರಾಗಿದ್ದರು. ಅವರು ಪಾಲಿಸುತ್ತಿದ್ದ ಕೆಲ ಮೂಢ ನಂಬಿಕೆಯ ಪದ್ಧತಿಗಳು, ಈಗ ಹಾಸ್ಯಾಸ್ಪದವೆನಿಸಿದರೂ ಲಭ್ಯವಿದ್ದ ವಸ್ತುಗಳನ್ನು ಬಳಸಿ ತಮಗೆ ಅಗತ್ಯವಾದ ಆಹಾರ ಮತ್ತು ಅವಶ್ಯಕ ಮೂಲಿಕೆಗಳನ್ನು ಬೆಳೆಸಲು ಕಲಿತಿದ್ದರು. 

	ಕಾಲಕ್ರಮೇಣ ಪ್ರಾಯಶಃ ಅಂತಃಕಲಹ ಹಾಗೂ ಯುದ್ಧಗಳಿಂದ ವ್ಯವಸಾಯಕ್ಕೆ ಗಮನ ಕಡಿಮೆಯಾಗತೊಡಗಿತು. ಬರಗಾಲಗಳಿಂದ ಪರಿಸ್ಥಿತಿ ಉಲ್ಬಣಿಸಿರಬಹುದು. ಕಾಡುಗಳು, ತೋಟಗಳು ನಾಶವಾದವು. ಹಲವಾರು ಮುಖ್ಯ ವ್ಯವಸಾಯ ಗ್ರಂಥಗಳು ಕಾಣೆಯಾದವು. ಪರಕೀಯರ ಆಳ್ವಿಕೆಯ ಕಾಲದಲ್ಲಿ ವ್ಯವಸಾಯ ಇನ್ನೂ ಶಿಥಿಲಗೊಂಡಿತು. ಬ್ರಿಟಿಷರಂತೂ ವ್ಯವಸಾಯಾಭಿವೃದ್ಧಿಗೆ ಬದಲು. ತಮ್ಮ ಆಳ್ವಿಕೆಗೊಳಪಟ್ಟಿದ್ದ ಇತರ ಪ್ರದೇಶಗಳಿಂದ ಆಮದು ಮಾಡಿಕೊಳ್ಳುವ ನೀತಿ ಅನುಸರಿಸಿದರು. ಇದೆಲ್ಲದರಿಂದ ವ್ಯವಸಾಯ ಲಾಭಕರವಲ್ಲದ ಕಷ್ಟದ ವೃತ್ತಿ, ದಡ್ಡರ ಕಸುಬು ಎಂಬ ಭಾವನೆ ಮೂಡತೊಡಗಿತು. 

	ಆದರೆ ಬೇಸಾಯ ಪೂರ್ತಿಯಾಗಿ ಮೂಲೆಗುಂಪಾಗಲಿಲ್ಲ. ಆಗಿಂದಾಗ್ಗೆ ಭೀಕರ ಕ್ಷಾಮವುಂಟಾದಾಗ ಬ್ರಿಟಿಷ್ ಸರ್ಕಾರ ಕೃಷಿ ಅಭಿವೃದ್ಧಿಯ ಕಡೆ ಗಮನ ಹರಿಸತೊಡಗಿತು. ಕ್ರಿ.ಶ. 1903ರಲ್ಲಿ ನೀರಾವರಿ ಆಯೋಗ ರಚಿತವಾಯಿತು. ಲಾರ್ಡ್‍ಕರ್ಜನ್ನರ ಕಾಲದಲ್ಲಿ ಕೃಷಿ ಸಂಶೋಧನೆಗೆ ಆದ್ಯತೆ ದೊರೆತು, ಪ್ರಗತಿಪರ ನೀತಿ ರೂಪುಗೊಂಡಿತು. ಅದೇ ವೇಳೆಗೆ ಅಮೆರಿಕದ ಹೆನ್ರಿಫಿಪ್ಸ್ ಎಂಬಾತನ 30 ಸಹಸ್ರ ಪೌಂಡ್ ಕೊಡುಗೆ ದೊರಕಿ, ಭಾರತ ಸರ್ಕಾರ 1905ರಲ್ಲಿ ಬಿಹಾರಿನ ಪೂಸಾದಲ್ಲಿ ಸ್ವಯಂಪೂರ್ಣ ಕೃಷಿ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿತು. ಮುಂದೆ ಇದನ್ನು ದೆಹಲಿಗೆ ವರ್ಗಾಯಿಸಲಾಯಿತು. ಭಾರತದ ಕೃಷಿ ಅಭಿವೃದ್ಧಿಗೆ ಇದರ ಸೇವೆ ಅನುಪಮವಾದದ್ದು. ಮೊದಲಿಗೆ ಪ್ರತಿ ಬೆಳೆಯಲ್ಲಿ ಉತ್ತಮ ತಳಿಗಳನ್ನು ಗುರುತಿಸಿ ಅವುಗಳ ಪೈಕಿ ಹೆಚ್ಚು ಇಳುವರಿ ಕೊಡುವ ರೋಗಮುಕ್ತ ಅಥವಾ ರೋಗ ನಿರೋಧಕ ಶಕ್ತಿಯಿರುವ ತಳಿಗಳನ್ನು ಆಯ್ದು ಪ್ರತ್ಯೇಕವಾಗಿ ಬೆಳೆಸುವ ಕ್ರಮ ಕೈಗೊಳ್ಳಲಾಯಿತು. ಕ್ರಮೇಣ ಈ ವಿಧಾನದಿಂದ ಅಧಿಕ ಇಳುವರಿ ನೀಡುವ ತಳಿಗಳು ತಯಾರಾದುವು. ಎರಡನೆಯ ಮಹಾಯುದ್ಧದ ವೇಳೆಗೆ ಭಾರತದಲ್ಲಿ ಆಹಾರದ ಅಭಾವ ತ¯ ಕೃಷಿ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುವಂತಾಯಿತು. ಮುಂದುವರಿದ ರಾಷ್ಟ್ರಗಳಿಂದ ಸುಧಾರಿತ ತಳಿ ಬೀಜಗಳನ್ನು ತರಿಸಿ ಇಲ್ಲಿ ಬೆಳೆಸುವ ಪ್ರಯೋಗ ಶುರುವಾದುವು. ಅಧಿಕ ಆಹಾರೋತ್ಪಾದನೆಯ ಯೋಜನೆಯನ್ನು 1942ರಲ್ಲಿ ಸರ್ಕಾರ ಕಾರ್ಯರೂಪಕ್ಕೆ ತಂದಿತು. ಹೆಚ್ಚು ವಿಸ್ತೀರ್ಣದ ಜಮೀನನ್ನು ಬೇಸಾಯಕ್ಕೊಳಪಡಿಸಿ ಆಹಾರೋತ್ಪಾದನೆ ಹೆಚ್ಚಿಸುವ ಪ್ರಯತ್ನ ಅಷ್ಟೊಂದು ಸಫಲವಾಗಲಿಲ್ಲ. 

	ದೇಶದ ಮೊದಲ ಪಂಚವಾರ್ಷಿಕಯೋಜನೆಯಲ್ಲಿ (1951-56) ವ್ಯವಸಾಯಕ್ಕೆ ಪ್ರಾಮುಖ್ಯತೆ ದೊರೆಯಿತು. ರಾಷ್ಟ್ರದ ಒಟ್ಟು ಯೋಜನಾ ವೆಚ್ಚದ ಶೇಕಡಾ 15ರಷ್ಟುನ್ನು ಮೀಸಲಿಡಲಾಯಿತು. ಸಾಕಷ್ಟು ನೀರಾವರಿ ಸೌಲಭ್ಯ ಒದಗಿಸಿ ಹೆಚ್ಚು ವಿಸ್ತೀರ್ಣದ ಜಮೀನನ್ನು ಕೃಷಿಯೋಗ್ಯಗೊಳಿಸಿ, ಉತ್ತಮ ಬೀಜ ಮತ್ತು ಗೊಬ್ಬರಗಳ ಬಳಕೆಯಿಂದ ಅಧಿಕ ಉತ್ಪತ್ತಿ ಪಡೆಯುವುದು ಈ ಯೋಜನೆಯ ಗುರಿಯಾಗಿತ್ತು. 1950-51ರ ಒಟ್ಟು ಆಹಾರೋತ್ಪಾದನೆ 54 ಮಿಲಿಯನ್ ಟನ್ನುಗಳಿಂದ 1955-56ರ ವೇಳೆಗೆ 64.8 ಮಿಲಿಯನ್ ಟನ್ನುಗಳಿಗೇರಿತು.

	ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ವ್ಯವಸಾಯೋತ್ಪನ್ನ ಉತ್ತಮಗೊಂಡಿದ್ದರಿಂದ ನಂತರ ಅದು ತಾನಾಗಿಯೇ ಮುಂದುವರಿಯಬಹುದೆಂದು ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ (1956-61) ವ್ಯವಸಾಯಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡಲಿಲ್ಲ. ಈ ಯೋಜನೆ ಕೈಗಾರಿಕಾಭಿವೃದ್ಧಿಗೆ ಅದರಲ್ಲೂ ಸಣ್ಣ ಕೈಗಾರಿಕಾಭಿವೃದ್ಧಿಗೆ ಮೀಸಲಾಗಿತ್ತು. ಆದರೆ ವ್ಯವಸಾಯೋತ್ಪನ್ನ ಅದೇ ಮಟ್ಟದಲ್ಲಿ ಮುಂದುವರಿಯಲಿಲ್ಲ. ಎಕರೆವಾರು ಉತ್ಪನ್ನ ಹೆಚ್ಚಲಿಲ್ಲ. ಉತ್ಪನ್ನದಲ್ಲಿನ ಹೆಚ್ಚಳ ಅಧಿಕ ಕ್ಷೇತ್ರದ ವ್ಯವಸಾಯದಿಂದ ಆಗಿತ್ತು. 75 ಮಿಲಿಯನ್‍ಟನ್ ಉತ್ಪಾದನೆಯ ಗುರಿಹೊಂದಿದ್ದ ಈ ಯೋಜನೆಯ ಅಂತ್ಯಕ್ಕೆ 76 ಮಿಲಿಯನ್‍ಟನ್ನುಗಳ ಉತ್ಪಾದನೆಯಾದರೂ ಎಕರೆವಾರು ಇಳುವರಿ ವೃದ್ಧಿಸಲಿಲ್ಲ. 

	ಮೂರನೆಯ ಪಂಚವಾರ್ಷಿಕಯೋಜನೆಯಲ್ಲಿ (1961-66) ಇದನ್ನು ಸರಿಪಡಿಸಲು ಪ್ರಯತ್ನಿಸಲಾಯಿತು. ವ್ಯವಸಾಯಾಭಿವೃದ್ದಿಗೆ ಪ್ರಥಮಸ್ಥಾನ ನೀಡಿ, ನೀರಾವರಿ ಸೌಲಭ್ಯ, ಉತ್ತಮ ಬೀಜ, ಸಾಕಷ್ಟು ಗೊಬ್ಬರ, ಉತ್ತಮ ಸಲಕರಣೆಗಳನ್ನು ಒದಗಿಸಿ ಉತ್ತಮ ಬೆಳವಣಿಗೆ ವಿಧಾನ ಮತ್ತು ಮಣ್ಣು ಸಂರಕ್ಷಣೆ ಮಾರ್ಗಗಳನ್ನು ಅನುಸರಿಸಿ ಉತ್ಪಾದನೆ ಹೆಚ್ಚಿಸಲು ಒತ್ತು ನೀಡಲಾಯಿತು. ಆದರೆ 100 ಮಿಲಿಯನ್‍ಟನ್ ಉತ್ಪಾದನೆಯ ಗುರಿಹೊಂದಿದ್ದ ಈ ಯೋಜನೆಯ ಅಂತ್ಯದಲ್ಲಿ 72ಮಿಲಿಯನ್ ಟನ್ ಮಾತ್ರ ಉತ್ಪಾದನೆಯಾಯಿತು. 1965-66ರಲ್ಲಿ ಉಂಟಾದ ಬರಗಾಲದಿಂದಾಗಿ ಇಳುವರಿ ಕಡಿಮೆಯಾಗಿತ್ತು. 

	ಪಾಕಿಸ್ತಾನ ಯುದ್ಧ, ರೂಪಾಯಿಯ ಅಪಮೌಲ್ಯ ಮತ್ತು 1965-66, 1966-67ರಲ್ಲಿ ಉಂಟಾದ ತೀವ್ರ ಬರಗಾಲ ಪರಿಸ್ಥಿತಿಯಿಂದ ಆರ್ಥಿಕ ಸ್ಥಿತಿ ಬಿಗಡಾಯಿಸಿ ಪಂಚವಾರ್ಷಿಕ ಯೋಜನೆಯ ಬದಲಿಗೆ, ಮೂರು ವರ್ಷ ಅಂದರೆ 1966-67, 1967-68, 1968-69, ವಾರ್ಷಿಕ ಯೋಜನೆಗಳನ್ನು ಕಾರ್ಯಗತ ಮಾಡಲಾಯಿತು. ಈ ಸಮಯದಲ್ಲಿ ಸಣ್ಣ ನೀರಾವರಿ ಸೌಲಭ್ಯ ಹೆಚ್ಚಿಸಲು ಗಮನ ಕೊಡಲಾಯಿತು. ಹಾಗೂ ಅಧಿಕ ಇಳುವರಿ ಕೊಡುವ ಗೋಧಿ, ಭತ್ತ, ಜೋಳ, ಸಜ್ಜೆ, ಮುಸುಕಿನಜೋಳ ತಳಿಗಳನ್ನು ತರಿಸಿ ಬೆಳೆಸಲುಪಕ್ರಮಿಸಲಾಯಿತು. ಇದು "ಹಸಿರು ಕ್ರಾಂತಿ"ಯ ನಾಂದಿ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಈ ತಳಿಗಳನ್ನು ಮೊದಲ ಬಾರಿಗೆ ಬೆಳೆದದ್ದು 1.89 ಮಿಲಿಯನ್ ಹೆಕ್ಟೇರುಗಳಲ್ಲಿ. ಇದು 1968-69ರ ವೇಳೆಗೆ 9.2 ಮಿಲಿಯನ್ ಹೆಕ್ಟೇರುಗಳಿಗೆ ಹೆಚ್ಚಿತು.

	ನಾಲ್ಕನೆಯ ಪಂಚವಾರ್ಷಿಕ ಯೋಜನೆ (1969-74)ಯಲ್ಲಿ ಸ್ವಲ್ಪಮಟ್ಟಿಗೆ ವ್ಯವಸಾಯ ಪ್ರಗತಿ ಸಾಧಿಸಲಾಯ್ತು. 1973ರ ವೇಳೆಗೆ ಆಹಾರದಲ್ಲಿ ಸ್ವಾವಲಂಬನೆ ಪಡೆಯುವ ಉದ್ದೇಶದಿಂದ 129 ಮಿಲಿಯನ್‍ಟನ್‍ಗಳ ಉತ್ಪಾದನಾ ಗುರಿಯಿಡಲಾಯಿತು. ಅನಂತರ ಅದನ್ನು 115 ಮಿಲಿಯನ್‍ಟನ್ನುಗಳಿಗೆ ಇಳಿಸಿಯೂ ಗುರಿಮುಟ್ಟಲಾಗಲಿಲ್ಲ್ಲ. 1973-74ರಲ್ಲಿ 104.7 ಮಿಲಿಯನ್‍ಟನ್ನುಗಳಷ್ಟು ಉತ್ಪಾದನೆ ಮಾತ್ರ ಸಾಧ್ಯವಾಯಿತು. ಇಳುವರಿ ಹೆಚ್ಚಿದರೂ ಮದು ತಪ್ಪಲಿಲ್ಲ. ಆದರೆ ಹಸಿರು ಕ್ರಾಂತಿ ಭಾರತಾದ್ಯಂತ ಹರಡಿತು. 1973-74ರ ವೇಳೆಗೆ ಅಧಿಕ ಇಳುವರಿ ನೀಡುವ ಬೆಳೆ ತಳಿಗಳ ವಿಸ್ತೀರ್ಣ 26.04 ಮಿಲಿಯನ್ ಹೆಕ್ಟೇರುಗಳಿಗೆ ಏರಿತು. ಸಹಾಯಕ ನೀರಾವರಿ ಯೋಜನೆಗಳು, ಸಾಕಷ್ಟು ರಾಸಾಯನಿಕ ಗೊಬ್ಬರಗಳ ಸರಬರಾಜು, ಮಣ್ಣಿನ ಮತ್ತು ಹವೆಯ ವೈವಿಧ್ಯಕ್ಕೆ ಸರಿಹೊಂದುವ ತಳಿಗಳ ಬಳಕೆ, ಸಾಮಯಿಕ ಸಸ್ಯಸಂರಕ್ಷಣೆಯ ಕ್ರಮಗಳು, ಕೃಷಿ ಸಾಮಗ್ರಿಗಳನ್ನು ಕೊಳ್ಳಲು ರೈತರಿಗೆ ಸಾಲ, ಹಾಗೂ ಉತ್ತಮ ಮಾರುಕಟ್ಟೆಗಳ ವ್ಯವಸ್ಥೆ-ಇವು ರೈತರಲ್ಲಿ ಹೊಸ ಆಸಕ್ತಿ ಮೂಡಿಸಿ ಈ ಕ್ರಾಂತಿಯ ಕನಸು ನನಸಾಯ್ತು. 1973-74ರಲ್ಲಿ ರೈತರಿಗೆ ಸುಮಾರು 750 ಕೋಟಿ ರೂಪಾಯಿಗಳಷ್ಟು ಕೃಷಿ ಸಾಲ ಕೊಡಲಾಗಿತ್ತು.

	ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ (1974-79) ಅಧಿಕ ಇಳುವರಿ ನೀಡುವ ತಳಿಗಳ ವಿಸ್ತೀರ್ಣವನ್ನು 169 ಮಿಲಿಯನ್ ಹೆಕ್ಟೇರುಗಳಿಂದ 180 ಮಿಲಿಯನ್ ಹೆಕ್ಟೇರುಗಳಿಗೆ ಹೆಚ್ಚಿಸುವ ಗುರಿ ಇತ್ತು. ಒಟ್ಟು ಉತ್ಪಾದನೆಯ ಗುರಿ 140 ಮಿಲಿಯನ್‍ಟನ್ನುಗಳು. ಇದರ ಜೊತೆಗೆ ಕಬ್ಬಿನ ಉತ್ಪಾದನೆ 17 ಮಿಲಿಯನ್‍ಟನ್ನು, ಹತ್ತಿ 80 ಲಕ್ಷ ಬೇಲು ಎಂದು ನಿಗದಿಪಡಿಸಲಾಗಿತ್ತು. 1977-78ರಲ್ಲಿ 125.6 ಮಿಲಿಯನ್ ಟನ್ನುಗಳ ಆಹಾರ ಧಾನ್ಯಗಳನ್ನೂ 18.78 ಮಿಲಿಯನ್‍ಟನ್ ಕಬ್ಬನ್ನೂ 71ಲಕ್ಷ ಬೇಲ್ ಹತ್ತಿಯನ್ನೂ ಉತ್ಪಾದಿಸಲಾಯಿತು. ಧಾನ್ಯಗಳಲ್ಲಿ ಗುರಿ ಮುಟ್ಟದೆ ಹೋದರೂ ಕಬ್ಬಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಯಿತು.

	ಈ ಕಾರ್ಯಕ್ರಮಗಳಿಂದಾಗಿ ಭಾರತದಲ್ಲಿ ವ್ಯವಸಾಯ ಈಗ ಉನ್ನತ ಸ್ಥಿತಿಗೆ ಬಂದಿದೆ. ಎಲ್ಲ ಬೆಳೆಗಳಲ್ಲೂ ಅಧಿಕ ಇಳುವರಿ ಕೊಡಬಲ್ಲ ಸಂಕರ ತಳಿಗಳನ್ನೂ ಸುಧಾರಿತ ತಳಿಗಳನ್ನೂ ಉತ್ಪಾದಿಸಿ ಹಂಚಲಾಗಿದೆ. ಮಣ್ಣಿನ ಮತ್ತು ಹವೆಯ ವೈವಿಧ್ಯಕ್ಕೆ ಹೊಂದಿಕೊಂಡು ಬೆಳೆಯುವ ತಳಿಗಳು ಈಗ ದೊರೆಯುತ್ತಲಿವೆ. ಪ್ರತಿಯೊಂದು ತಳಿಯ ಬೆಳೆ ವಿಧಾನವನ್ನು ವಿವರಿಸಿ ರೈತರಿಗೆ ತಿಳುವಳಿಕೆ ಕೊಡಲಾಗುತ್ತಿದೆ. ಇದಕ್ಕೆ ಅಗತ್ಯವಾದ ಸುಧಾರಿತ ಬೀಜ, ರಾಸಾಯನಿಕ ಗೊಬ್ಬರ, ಸಸ್ಯಸಂರಕ್ಷಣಾ ಸಲಕರಣೆ ಮತ್ತು ರಾಸಾಯನಿಕಗಳು ಸುಲಭವಾಗಿ ಸಿಕ್ಕುತ್ತಿವೆ. ಇದರ ಅನುಸರಣೆಗೆ ಹೆಚ್ಚು ಖರ್ಚು ಆಗುವುದರಿಂದ ರೈತರಿಗೆ ಸಾಲ ಸೌಲಭ್ಯಗಳು ಸುಲಭವಾಗಿ ದೊರಕುವ ಏರ್ಪಡಿಸಿದೆ. ಇವೆಲ್ಲದರಿಂದ ಅಧಿಕ ಇಳುವರಿ ಕೊಡುವ ತಳಿಗಳ ವಿಸ್ತೀರ್ಣ ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ.

	ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ನೀರಾವರಿ ಬಾವಿಗಳೂ ನೀರೆತ್ತುವ ಪಂಪುಗಳೂ ಅಧಿಕಗೊಂಡಿವೆ. 1977ರಲ್ಲಿ ಗುಜರಾತ್, ಆಂಧ್ರಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಡೀಸೆಲ್ ಪಂಪುಸೆಟ್ಟುಗಳಿದ್ದುವು. ಇಂದು ಅವುಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿ ವಿದ್ಯುತ್‍ಚಾಲಿತ ಪಂಪುಸೆಟ್ಟುಗಳ ಪೈಕಿ ತಮಿಳುನಾಡು 7,84,000 ಮಹಾರಾಷ್ಟ್ರ, 3,88,000. ಆಂಧ್ರ ಪ್ರದೇಶ 2,34,000. 1,84,000 ಕರ್ನಾಟಕ ಸೆಟ್ಟುಗಳನ್ನು ಪಡೆದಿದ್ದುವೆಂದು ಹೇಳಲಾಗಿದೆ. ಯಂತ್ರಗಳ ಅಧಿಕ ಬೆಲೆ ರೈತರ ಸಣ್ಣ ಹಿಡುವಳಿ, ಅಧಿಕ ನಿರ್ವಹಣಾ ಖರ್ಚು ಮತ್ತು ಭೂ ಮೇಲ್ಮೈಲಕ್ಷಣಗಳಿಂದಾಗಿ ನೇಗಿಲು ಮತ್ತಿತರ ಸಣ್ಣ ಸಲಕರಣೆಗಳಿಲ್ಲದೆ. ದಕ್ಷಿಣ ಭಾರತದಲ್ಲಿ ಯಂತ್ರಗಳ ಬಳಕೆ ಅತಿ ಹೆಚ್ಚಾಗಿ ಬೆಳೆದಿಲ್ಲ. ಪಂಜಾಬ್ ಹಾಗೂ ಗುಜರಾತ್ ರಾಜ್ಯಗಳಲ್ಲಿ ಅತ್ಯಧಿಕ ಸಂಖ್ಯೆಯ ಟ್ರ್ಯಾಕ್ಟರ್‍ಗಳು ಬಳಕೆಯಲ್ಲಿವೆ.

	ಭಾರತದಲ್ಲಿ ಕೃಷಿ ಮುಂದುವರಿದಿದೆ ನಿಜ. ಆಮದು ನಿಂತಿದೆ. ಆದರೆ ಇಳುವರಿಯ ಸಾಮಥ್ರ್ಯ ಪೂರ್ತಿ ಸಾಧಿತವಾಗಿಲ್ಲ. ಇತರ ಮುಂದುವರಿದ ದೇಶಗಳೊಡನೆ ಹೋಲಿಸಿದರೆ ಭಾರತ ಅತ್ಯಂತ ಕೆಳಮಟ್ಟದಲ್ಲಿದೆ. ಗೋದಿಯಲ್ಲಿ ಪೂರ್ಣ ಉತ್ಪತ್ತಿ ಪಡೆಯಲು ಉತ್ತರ ಭಾರತದಲ್ಲಿ ಸಾಧ್ಯವಾಗಿದೆ. ಇತರ ಬೆಳೆಗಳಲ್ಲಿ ಆ ಸಾಧ್ಯತೆ ಇದ್ದರೂ ಪೂರ್ಣವಾಗಿ ಸಾಧಿಸಲಾಗಿಲ್ಲ. ಭಾರತದ ಎಲ್ಲ ಪ್ರದೇಶಗಳಲ್ಲೂ ಅಧಿಕ ಇಳುವರಿ ಕೊಡುವ ತಳಿಗಳನ್ನು ಬೆಳೆಸುತ್ತಿಲ್ಲ. ಅನಕ್ಷರತೆ, ಆರ್ಥಿಕಸ್ಥಿತಿ, ಸಣ್ಣ ಹಿಡುವಳಿ, ಮೂಢನಂಬಿಕೆಗಳು ಮುಂತಾದವು ಇದಕ್ಕೆ ಕಾರಣವಾಗಿವೆ. ಪ್ರತಿ ಬೆಳೆಯ ಪ್ರತಿ ತಳಿಗೂ ಅನುಸರಿಸಬೇಕಾದ ಪೂರ್ಣ ವಿಧಾನವನ್ನು ವಿವರಿಸಿದರೂ ಅದನ್ನು ಭಾಗಶಃ ಮಾತ್ರ ಆಚರಿಸುವುದರಿಂದ ಪೂರ್ಣ ಬೆಳೆ ಪಡೆಯಲಾಗುತ್ತಿಲ್ಲ. ಇದರಿಂದ ಬರಬಹುದಾದ ಉತ್ಪನ್ನ ಬರುತ್ತಿಲ್ಲ. 
												(ಜಿ.ವಿ.ಬಿ.ಎನ್.)
									     (ಪರಿಷ್ಕರಣೆ : ಡಾ. ಟಿ ಎನ್ ಪ್ರಕಾಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ